ಫ್ರಾಕ್ಯಸ್ಟೋರೀಯಸ್, ಗಿರೊಲ್ಯಾಮೊ
1483?-1553. ಇಟಲಿಯ ಸುಪ್ರಸಿದ್ಧ ವಿದ್ವಾಂಸ ಹಾಗೂ ವೈದ್ಯ. ಪೆರೋನದ ಶ್ರೀಮಂತ ಮನೆತನದಲ್ಲಿ ಜನಿಸಿದನೆಂದು ಪ್ರತೀತಿ. ಏಳುಮಂದಿ ಸಹೋದರರ ಪೈಕಿ ಇವನು ಅರನೆಯವನು. ಚಿಕ್ಕಂದಿನಲ್ಲೆ ತಾಯಿಯನ್ನು ಕಳೆದುಕೊಂಡ. ಬಾಲ್ಯ ವಿದ್ಯಾಭ್ಯಾಸ ತಂದೆಯ ಬಳಿ ಜರಗಿತು. ಪೆರೋನದವನೇ ಆಗಿದ್ದು ಅನಂತರ ಪಾಡುವದಲ್ಲಿ ನೆಲಸಿದ್ದ ಮನೆತನದ ಸ್ನೇಹಿತ ಗಿರೊಲ್ಯಾಮೊ ಡೆಲ್ಲ ಟೊರ್ರಿ ಎಂಬ ವೈದ್ಯನೊಡನೆ ಉಳಿದು ಅವನ ಬಳಿ ವೈದ್ಯಕೀಯವನ್ನು ವ್ಯಾಸಂಗಿಸಲು ಫಾಕ್ಯಸ್ಟೋರೀಯಸ್ ಅಲ್ಲಿಗೆ ಹದಿವಯಸ್ಸಿನಲ್ಲಿ ತೆರಳಿದ.  ಜೊತೆಯಲ್ಲಿಯೇ ಸಾಹಿತ್ಯ, ಗಣಿತ, ಖಗೋಳವಿಜ್ಞಾನ ಮತ್ತು ತತ್ತ್ವಶಾಸ್ತ್ರವನ್ನೂ ವ್ಯಾಸಂಗಿಸಿ ಪದವೀಧರನಾದ (1502). ಆ ಕೂಡಲೆ ಪಾಡುವಾ ವಿಶ್ವವಿದ್ಯಾಲಯದಲ್ಲಿ ತರ್ಕಶಾಸ್ತ್ರದ ಅಧ್ಯಾಪಕನಾಗಿ ನೇಮಕಗೊಂಡು ಶೀಘ್ರದಲ್ಲೆ ಪ್ರಾಧ್ಯಾಪಕನಾಗಿ ಬಡತಿಹೊಂದಿದ. 1508ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸುಮಾರು ಒಂದುವರ್ಷ ಯೂರೋಪಿನ ಅನೇಕ ಕಡೆಗಳಲ್ಲಿ ಪ್ರವಾಸ ಮಾಡುತ್ತ ಕೊನೆಗೆ ವೃತ್ತಿವೈದ್ಯನಾಗಲು ಮತ್ತು ಮನೆತನದ ಆಸ್ತಿ ನೋಡಿಕೊಳ್ಳಲು ವೆರೋನಕ್ಕೆ ವಾಪಸು ಬಂದ. ಮತೀಯ ವಿಷಯಗಳಲ್ಲಿ ಪರಿಣತನಾಗಿದ್ದು ಮಠಾಧಿಕಾರಿಗಳ ಸ್ನೇಹಗೌರವ ಸಂಪಾದಿಸಿದವನಾಗಿದ್ದುದರಿಂದ 1546ರಲ್ಲಿ ವೆರೋನದ ಮಠ ಮಂಡಲಿಯ ಸದಸ್ಯನಾಗಿ ನಾಮಕರಣ ಮಾಡಲ್ಪಟ್ಟು ಕೊನೆಯತನಕವೂ ಬಹುಮುಖ ಚಟುವಟಿಕೆಗಳಲ್ಲಿ ನಿರತನಾಗಿದ್ದ. ಎಪ್ಪತ್ತು ವರ್ಷ ವಯಸ್ಸು ಮೀರಿದ ಮೇಲೂ ಇವನ ಮಾನಸಿಕ ಔನ್ಯತ್ಯ ಕುಂದಿರಲಿಲ್ಲ. ಪೆರೋನಕ್ಕೆ ಸೇರಿದಂತೆಯೇ ಇದ್ದ ಇನ್‍ಕಾಫಿಯಲ್ಲಿಯ ಸ್ವಗೃಹದಲ್ಲಿ 1553 ಆಗಸ್ಟ್ 6ರಂದು ಲಕ್ವ ಹೊಡೆದು ಮರುದಿನ ಮೃತನಾದ.

	ಸಮಕಾಲೀನ ಅತ್ಯಂತ ಮೇಧಾವಿ ವಿದ್ವಾಂಸರ ಪೈಕಿ ಫ್ರಾಕ್ಯಸ್ಟೋರೀಯಸ್ ಒಬ್ಬ. ಸಿಫಿಲೈಡಿಸ್ ಸೈವ್ ಮಾರ್ಚಿ ಗ್ಯಾಲಿಸಿ ಲಿಬ್ರೈಟ್ರೆನ್ ಎಂಬ ಕಾವ್ಯ ಬರೆದು 1503ರಲ್ಲಿ ಪ್ರಕಟಿಸಿ ಆಧುನಿಕ ಲ್ಯಾಟಿನ್ ಭಾಷೆಯ ಕವಿಗಳಲ್ಲಿ ಅತ್ಯುತ್ತಮನೆಂದು ಪರಿಗಣಿಸಲ್ಪಟ್ಟ. ಈ ಪ್ರಸಿದ್ಧ ಕವನ ಇಟ್ಯಾಲಿಯನ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಅನೇಕ ಸಾರಿ ಪುನರ್ಮುದ್ರಣಗೊಂಡಿದೆ. ಸಿಫಿಲೋ ಎಂಬ ಈ ಕವನದ ದುರದೃಷ್ಟ ನಾಯಕನಿಂದ ಸಿಫಿಲಿಸ್ ಎಂಬ ರೋಗಕ ಪದವ್ಯುತ್ಪತ್ತಿ ಆಯಿತೆಂದು ಹೇಳಲಾಗಿದೆ. ಸಿಫಿಲಿಸ್ ಎಂಬ ಶಬ್ದ ಬಲು ಹಿಂದಿನಿಂದ ಬಳಕೆಯಲ್ಲಿದ್ದ ಸಿಫಿಲೈಡಿಸ್ ಎಂಬ ಶಬ್ದದಿಂದ ಬಂದುದು ಎಂದು ಹೇಳುವುದೂ ಉಂಟು. ಯಾವುದು ಸರಿ ಎಂದು ಖಚಿತವಾಗಿ ಹೇಳುವಂತಿಲ್ಲ. ತತ್ತ್ವಶಾಸ್ತ್ರದ ಅನೇಕ ಶಾಖೆಗಳಲ್ಲಿ ವ್ಯಾಪಕ ಜ್ಞಾನ, ವೈದ್ಯಕೀಯದಲ್ಲಿ ಶ್ಲಾಘನೀಯ ಕುಶಲತೆ, ಲ್ಯಾಟಿನ್ ಕವನಗಳನ್ನು ರಚಿಸುವಲ್ಲಿ ಅತಿಶಯ ಸಾಮಥ್ರ್ಯ ಇವೆಲ್ಲವೂ ತನಗಿರುವುದನ್ನು ಒಂದೇ ಕೃತಿಯಲ್ಲಿ ಪ್ರದರ್ಶಿಸುವುದಕ್ಕಾಗಿ ಇವನು ಈ ಕವನ ಬರೆದನೆಂದು ತಿಳಿದುಬರುತ್ತದೆ. ರೋಗದ ಸಾಂಕ್ರಾಮಿಕತೆಯ ವಿಷಯಗಳಲ್ಲಿ ಇವನು ವಿಶದಪಡಿಸಿದ ವಿಷಯಗಳು ಮುಂದೆ ಲೂಯಿ ಪಾಸ್ತರ್ ಮಂಡಿಸಿದ ಸಿದ್ಧಾಂತಗಳಿಗೆ ಹಿನ್ನೆಲೆಯಂತಿವೆ.	
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ